ಬಳ್ಳಾರಿ: ಕಲುಷಿತ ನೀರು ಕುಡಿದು ಬಾಲಕಿ ಸಾವು, 20 ಮಂದಿ ಅಸ್ವಸ್ಥ

News Desk
2 Min Read

ಬಳ್ಳಾರಿ ಜುಲೈ 25: ಬಳ್ಳಾರಿಯ ಕಂಪ್ಲಿ ತಾಲೂಕಿನ ಗೋನಾಳ್ ಗ್ರಾಮದಲ್ಲಿ ಕಲುಷಿತ ನೀರು ಕುಡಿದು 11 ವರ್ಷದ ಬಾಲಕಿ ಸಾವನ್ನಪ್ಪಿದ್ದು, 20 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಸ್ಥಳಕ್ಕೆ ಜಿಲ್ಲಾ ಆರೋಗ್ಯ ತಂಡ ಗ್ರಾಮಕ್ಕೆ ಧಾವಿಸಿದ್ದು ಪರಿಶೀಲನೆ ನಡೆಸಿದೆ. ಕಲುಷಿತ ನೀರು ಸೇವಿಸಿದ ಬಾಲಕಿ ಆರೋಗ್ಯ ಬೆಳಗ್ಗೆ ಏಕಾಏಕಿ ಏರುಪೇರಾಗಿತ್ತು. ಕಂಪ್ಲಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗುತ್ತಿರುವಾಗ ಆಕೆ ಮೃತಪಟ್ಟಿದ್ದಾಳೆ. ಮೃತ ಬಾಲಕಿಯನ್ನು ಗೋನಾಳ್ ಗ್ರಾಮದ ಸುಕನ್ಯ (11) ಎಂದು ಗುರುತಿಸಲಾಗಿದೆ.

ಗ್ರಾಮದಲ್ಲಿ ನೀರು ಸೇವಿಸಿದ ಬಳಿಕ 20ಕ್ಕೂ ಹೆಚ್ಚು ಜನರಿಗೆ ವಾಂತಿ-ಭೇದಿ ಕಾಣಿಸಿಕೊಂಡಿದೆ. ನಲ್ಲಿಯಲ್ಲಿ ಬಂದಿರುವ ಕಲುಷಿತ ನೀರು ಸೇವಿಸಿರುವುದೇ ಇದಕ್ಕೆ ಕಾರಣ ಎಂಬ ಸುದ್ದಿಗಳು ಹಬ್ಬಿವೆ. ವಾಂತಿ ಬೇಧಿಯಿಂದ ಅಸ್ವಸ್ಥರಾದವರು ಗ್ರಾಮದ ಸರ್ಕಾರಿ ಶಾಲೆಯಲ್ಲಿಯೂ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕಲುಷಿತ ನೀರಿನಿಂದಾಗಿ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ. ಶ್ರೀರಾಮರಂಗಾಪುರದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದ ಅಧಿಕಾರಿಗಳು, ಸಿಬ್ಬಂದಿ, ಆಶಾ ಕಾರ್ಯಕರ್ತರು ಮತ್ತು ಗ್ರಾ.ಪಂ ಅಧಿಕಾರಿಗಳು ಗ್ರಾಮದಲ್ಲಿ ಠಿಕಾಣಿ ಹೂಡಿದ್ದಾರೆ.

- Advertisement -

ತೀವ್ರ ಅಸ್ವಸ್ಥಗೊಂಡ ಬಾಲಕಿ ಮೃತಪಟ್ಟ ಬಳಿಕ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ. ಇತ್ತೀಚೆಗೆ ಸುರಿದ ಮಳೆಯಿಂದಾಗಿ ನಾರಿಹಳ್ಳದಲ್ಲಿ ಹರಿಯುವ ಕಲುಷಿತ ನೀರು ಗ್ರಾಮ ಪಂಚಾಯಿತಿ ಸರಬರಾಜು ಮಾಡುವ ನಲ್ಲಿಗಳಲ್ಲಿ ಬಂದಿರುವುದರಿಂದ ಜನರಲ್ಲಿ ವಾಂತಿ-ಭೇದಿ ಹರಡುವಂತಾಗಿದೆ ಎಂಬುದು ಸಾರ್ವಜನಿಕರ ಆರೋಪವಾಗಿದೆ. ಗ್ರಾಪಂ ಅಭಿವೃದ್ಧಿ ಅಧಿಕಾರಿ ಶಿಲ್ಪರಾಣಿ ಸೇರಿದಂತೆ ಆರೋಗ್ಯ ಅಧಿಕಾರಿಗಳು ಗೋನಾಳ್ ಗ್ರಾಮದಲ್ಲಿ ಮನೆ ಮನೆಗೆ ತೆರಳಿ, ಆರೋಗ್ಯ ತಪಾಸಣೆ ಮಾಡುತ್ತಿದ್ದಾರೆ. ವಾಂತಿ-ಭೇದಿ ನಿಯಂತ್ರಣಕ್ಕಾಗಿ ಎಲ್ಲಾ ರೀತಿಯಲ್ಲಿ ಗ್ರಾಪಂ ಹಾಗೂ ಆರೋಗ್ಯ ಅಧಿಕಾರಿಗಳು ಕ್ರಮವಹಿಸಿದ್ದಾರೆ.

ಸ್ಥಳೀಯರ ಆಕ್ರೋಶ; ಘಟನೆ ಬಳಿಕ ಜನರು ನಗರಸಭೆ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಕುಡಿಯಲು ಹೊಸಲು ನೀರು ಬಿಡುತ್ತಾರೆ. ನಮಗೆ ಕುಡಿಯಲು ನೀರಿಲ್ಲ. ಎರಡು ದಿನ ಆದರೆ ನೀರಿನಲ್ಲಿ ಹುಳುಗಳು ಆಗುತ್ತವೆ.

ಹುಡುಗರು, ದೊಡ್ಡೋರಿಗೆ ಇದೇ ರೀತಿ ಸಮಸ್ಯೆ ಆಗುತ್ತಿದೆ. ವಾಂತಿಬೇಧಿ ಹೆಚ್ಚಾದ ಕಾರಣ ಆಸ್ಪತ್ರೆಗೆ ಅಡ್ಮಿಟ್‌ ಆಗಿದ್ದೇವೆ. ನೀರು ಕುಡಿದರೆ ಒಳ್ಳೆಯದ್ದು ಎಂದು ವೈದ್ಯರು ಹೇಳುತ್ತಾರೆ. ಆದರೆ ನಮ್ಮಲ್ಲಿ ಹೊಸಲು ನೀರು ಬರುತ್ತದೆ, ಅದನ್ನು ನೋಡಿದರೆ ಭಯ ಆಗುತ್ತದೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದರು.

ರಾಯಚೂರಿನಲ್ಲೂ ಇಂತಹ ಪ್ರಕರಣ; ಮಳೆಗಾಲ ಆರಂಭವಾದಾಗಿನಿಂದಲೂ ಇಂತಹ ಘಟನೆಗಳು ರಾಜ್ಯದಾದ್ಯಂತ ವರದಿಯಾಗುತ್ತಿವೆ. ಜುಲೈ ತಿಂಗಳ ಆರಂಭದಲ್ಲಿ ರಾಯಚೂರಿನಲ್ಲಿ ಕಲುಷಿತ ನೀರು ಕುಡಿದು 10 ವಿದ್ಯಾರ್ಥಿಗಳು ಸೇರಿದಂತೆ 30ಕ್ಕೂ ಹೆಚ್ಚು ಜನರು ವಾಂತಿ, ಭೇದಿಯಿಂದ ಆಸ್ಪತ್ರೆಗೆ ದಾಖಲಾಗಿದ್ದರು.

ಮೂವರು ಸಾವನ್ನಪ್ಪಿದ್ದರು. ಕಲುಷಿತ ನೀರು ಕುಡಿದು ಅಸ್ವಸ್ಥಗೊಳ್ಳುವುದು ಇದೇ ಮೊದಲಲ್ಲ, ಕಳೆದ ಮೇ ತಿಂಗಳಲ್ಲಿ ರಾಯಚೂರಿನ ಇಂದಿರಾ ನಗರದ ನಿವಾಸಿಗಳು ಕಲುಷಿತ ನೀರು ಕುಡಿದು ಓರ್ವ ಮಹಿಳೆ ಮೃತಪಟ್ಟಿದ್ದರು. 60ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡು ಜಿಲ್ಲೆಯ ರಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಕುಡಿಯುವ ನೀರಿಗೆ ಚರಂಡಿ ನೀರು ಸೇರುತ್ತಿರುವ ಆರೋಪ ಕೇಳಿಬಂತ್ತು.

- Advertisement -

ಈಗಾಗಲೇ 6 ಮಂದಿ ಮೃತಪಟ್ಟಿದ್ದರೂ ರಾಯಚೂರು ಜಿಲ್ಲಾಡಳಿತ ಎಚ್ಚೆತ್ತುಕೊಂಡಿಲ್ಲ ಎಂಬ ಆರೋಪ ಕೇಳಿಬರುತ್ತಿದೆ. ರಾಯಚೂರಿನಲ್ಲಿ ಕಲುಷಿತ ನೀರು ಕುಡಿದು 7 ಮಂದಿ ಮೃತಪಟ್ಟಿದ್ದಾರೆ. ಸರ್ಕಾರ ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದೆ.

- Advertisement -
TAGGED: ,
Share this Article
Leave a comment
adbanner