ಬೆಂಗಳೂರು(ಆ.22): ರಾಜಸ್ಥಾನದ ಕ್ಯಾಸಿನೋದಲ್ಲಿನ ನಡೆಯುತ್ತಿರುವ ಪಾರ್ಟಿ ಮೇಲೆ ಜೈಪುರ ಪೊಲೀಸರು ದಾಳಿ ಮಾಡಿದ್ದಾರೆ. ಈ ವೇಳೆ 13 ಮಹಿಳೆಯರು ಸೇರಿದಂತೆ ಒಟ್ಟು 84 ಮಂದಿಯನ್ನು ಅರೆಸ್ಟ್ ಮಾಡಲಾಗಿದೆ. ಇದರಲ್ಲಿ ಕರ್ನಾಟಕದ ಮೂವರು ಪೊಲೀಸರು ಸೇರಿದ್ದಾರೆ ಅನ್ನೋ ಮಾಹಿತಿಯನ್ನು ಜೈಪುರ ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಡ್ಯೂಟಿಗೆ ರಜೆ ಹಾಕಿ ರೇವ್ ಪಾರ್ಟಿಗೆ ಹಾಜರಾಗಿದ್ದ ಆಂಜಿನಪ್ಪ ಸೇರಿದಂತೆ ಮೂವರು ಕರ್ನಾಟಕ ಪೊಲೀಸ್ ಅಧಿಕಾರಿಗಳನ್ನು ಬಂಧಿಸಲಾಗಿದೆ. ಇನ್ನು ಕೋಲಾರದ ತೆರಹಳ್ಳಿ ಶಾಲಾ ಶಿಕ್ಷಕ ಕೆಎನ್ ರಮೇಶ್ ಅವರನ್ನು ಬಂಧಿಸಲಾಗಿದೆ. ತಲಾ 2 ಲಕ್ಷ ರೂಪಾಯಿ ಪಾವತಿಸಿ ಈ ಪಾರ್ಟಿಗೆ ತೆರಳಿದ್ದರು.
ಕೋಲಾರದ ಸೈಬರ್ ಕ್ರೈಂ ಇನ್ಸ್ಪೆಕ್ಟರ್ ಆಂಜಿನಪ್ಪ, ಕೆಎಎಸ್ ಅಧಿಕಾರಿ ಶ್ರೀನಾಥ್, ಶಿಕ್ಷಕ ರಮೇಶ್, ಕೋಲಾರ ನಗರಸಭೆ ಸದಸ್ಯರಾದ ಸತೀಶ್, ಶಬರೀಶ್, ವ್ಯಾಪಾರಿ ಸುಧಾಕರ್ ಸೇರಿ 84 ಮಂದಿಯನ್ನು ಬಂಧಿಸಲಾಗಿದೆ. ಬಹುತೇಕ ಕರ್ನಾಟಕ, ಹರಿಯಾಣ, ಪಂಜಾಬ್, ಉತ್ತರ ಪ್ರದೇಶ, ದೆಹಲಿ ಹಾಗೂ ಮಹಾರಾಷ್ಟ್ರದವರೇ ರೇವ್ ಪಾರ್ಟಿಯಲ್ಲಿ ಭಾಗವಹಿಸಿದ್ದರು. ಬಂಧಿತರಿಂದ 23 ಲಕ್ಷ ರೂಪಾಯಿ, 20 ವಿಲಾಸಿ ಕಾರುಗಳು, 1 ಟ್ರಕ್ ಹಾಗೂ ಹುಕ್ಕಾ ಪಾಟ್, 100 ವಿದೇಶಿ ಲಿಕರ್ ಬಾಟೆಲ್ಗಳನ್ನು ಜಪ್ತಿ ಮಾಡಿದ್ದಾರೆ.