ಹಾಸನ: ಇಲ್ಲಿನ ಗುಡ್ಡೇನಹಳ್ಳಿ ಗ್ರಾಮದಲ್ಲಿ ತಂತಿಯಿಂದ ಬಿಗಿದು ಉಸಿರುಗಟ್ಟಿಸಿ ಮಹಿಳೆಯೊಬ್ಬರನ್ನು ಹತ್ಯೆ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ. ಸಿರಿಸ್ (23) ಕೊಲೆಯಾದವರು. ಆರೋಪಿ ಆದರ್ಶ್ (26) ಎಂಬಾತ ಹತ್ಯೆ ಮಾಡಿ ಪರಾರಿ ಆಗಿದ್ದಾನೆ. ಸಿರಿಸ್ ಹಾಗೂ ಆದಿ ಇಬ್ಬರೂ ಲಿವಿಂಗ್ ರಿಲೇಶನ್‌ಶಿಪ್‌ನಲ್ಲಿದ್ದರು ಎಂದು ತಿಳಿದು ಬಂದಿದೆ.
ಸಿರಿಸ್ ಬೆಂಗಳೂರಿನ ವಿಜಯನಗರ ಮೂಲದವಳಾಗಿದ್ದು , ಆರೋಪಿ ಆದರ್ಶ್ ಮಾರನಾಯಕನಹಳ್ಳಿ ಗ್ರಾಮದವನು. ಸಿರಿಸ್-ಆದಿ ಎಂಟು ತಿಂಗಳ ಹಿಂದೆ ಫೇಸ್‌ಬುಕ್‌ನಲ್ಲಿ ಪರಿಚಯವಾಗಿದ್ದು, ಪರಿಚಯ ಪ್ರೀತಿಗೆ ತಿರುಗಿ, ಒಂದು ತಿಂಗಳ ಹಿಂದಷ್ಟೇ ಗುಡ್ಡೇನಹಳ್ಳಿ ಗ್ರಾಮಕ್ಕೆ ಬಂದು ಬಾಡಿಗೆ ಮನೆಯಲ್ಲಿ ವಾಸವಿದ್ದರು. ಇಬ್ಬರು ಒಂದೇ ಪೆಟ್ರೋಲ್ ಬಂಕ್‌ನಲ್ಲಿ ಕೆಲಸ ಮಾಡಿಕೊಂಡಿದ್ದರು ಎಂದು ತಿಳಿದು ಬಂದಿದೆ.
- Advertisement -
ಈ ಮೊದಲು ಸಿರಿಸ್ ಬೆಂಗಳೂರಿನಲ್ಲೇ ಕಂಪನಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದರು. ಬಳಿಕ ಆಕೆ ಬೆಂಗಳೂರು ಬಿಟ್ಟು ಹಾಸನಕ್ಕೆ ಬಂದಿದ್ದಾಳೆ. ಇವರು ಮದುವೆಯಾಗಿರುವ ಬಗ್ಗೆ ಮಾಹಿತಿ ಇಲ್ಲ. ಹೀಗಾಗಿ ಲಿವಿಂಗ್ ಟುಗೆದರ್‌ನಲ್ಲಿದ್ದರು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಸದ್ಯ ಹತ್ಯೆಗೆ ಕಾರಣವೇನು ಎಂಬುದು ತಿಳಿದು ಬಂದಿಲ್ಲ. ಸ್ಥಳಕ್ಕೆ ಶ್ವಾನ ದಳ, ಎಎಸ್‌ಪಿ ತಮ್ಮಯ್ಯ , ಡಿವೈಎಸ್‌ಪಿ ಉದಯ್‌ಭಾಸ್ಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೆನ್‌ಷನ್‌ಮೊಹಲ್ಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.