ಉಡುಪಿ, ಡಿ.28 : ಶಿಕ್ಷಕರೊಬ್ಬರು ವಿದ್ಯಾರ್ಥಿಗಳ ಮುಂದೆಯೇ ಕುಡಿದು ಟೈಟ್ ಆಗಿ ಶಾಲೆ ಜಗಲಿಯಲ್ಲೇ ಮಲಗಿದ ಘಟನೆ ಉಡುಪಿಯ ಪೆರ್ಡೂರು ಗ್ರಾಮದ ಅಲಂಗಾರು ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.
ಪೆರ್ಡೂರು ಗ್ರಾಮದ ಅಲಂಗಾರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕೃಷ್ಣಮೂರ್ತಿ ಎಂಬ ಶಿಕ್ಷಕ ಮದ್ಯ ಸೇವಿಸಿ ಜಗಲಿಯಲ್ಲಿ ಮಲಗಿದ್ದಾರೆ. ಶಿಕ್ಷಕನ ಅವಾಂತರವನ್ನು ವಿಡಿಯೋ ಮಾಡಿದ ಸ್ಥಳೀಯರು ಜಾಲತಾಣದಲ್ಲಿ ಹರಿಯ ಬಿಟ್ಟಿದ್ದಾರೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಶಿಕ್ಷಕನನ್ನು ಕೂಡಲೇ ಅಮಾನತು ಮಾಡುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಶಿಕ್ಷಣ ಅಧಿಕಾರಿಗಳು ಶಿಕ್ಷಕ ಕೃಷ್ಣಮೂರ್ತಿ ಮೇಲೆ ಯಾವ ಕ್ರಮವನ್ನೂ ಕೈಗೊಂಡಿಲ್ಲ ಎಂದು ಊರಿನವರು ಹೇಳುತ್ತಿದ್ದಾರೆ. ಶಿಕ್ಷಕನನ್ನ ಕೂರಿಸಿ ವಿಚಾರಣೆ ಮಾಡುತ್ತಿರುವ ಬಿಇಓ ರಂಗನಾಥ್, ಕೇವಲ ವಿಚಾರಣೆಯಲ್ಲಿ ದಿನ ಕಳೆಯುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಕೂಡಲೇ ಕೃಷ್ಣಮೂರ್ತಿ ಅವರನ್ನ ಅಮಾನತು ಮಾಡುವಂತೆ ಪಂಚಾಯತ್ ಅಧ್ಯಕ್ಷ ದೇವು ಪೂಜಾರಿ ಪಟ್ಟು ಹಿಡಿದಿದ್ದಾರೆ.