ಬೈಂದೂರು: ಗೋದಾಮಿನಲ್ಲಿ ಅಕ್ರಮವಾಗಿ ದಾಸ್ತಾನು ಇರಿಸಿದ್ದ ಅನ್ನಭಾಗ್ಯದ ಅಕ್ಕಿಯನ್ನು ಅಧಿಕಾರಿಗಳ ತಂಡ ವಶಪಡಿಸಿಕೊಂಡಿರುವ ಘಟನೆ ಶಿರೂರು ಗ್ರಾಮದ ಹಡವಿನಕೋಣೆ ಎಂಬಲ್ಲಿ ಜು.26ರಂದು ಬೆಳಗ್ಗೆ ನಡೆದಿದೆ.
ಖಾಜಿ ಹಸನ್ ಎಂಬವರ ಗೋದಾಮಿನಲ್ಲಿ ಕೋಟೇಶ್ವರ ಬೀಚ್ ರಸ್ತೆಯ ಮೊಹಿದ್ದೀನ್ ಎಂಬಾತ ಅನ್ನಭಾಗ್ಯ ಯೋಜನೆಗೆ ಸಂಬಂಧಿಸಿದ ಅಕ್ಕಿಯನ್ನು ಕಾನೂನು ಬಾಹಿರವಾಗಿ ಸಂಗ್ರಹಿಸಿ ಅಕ್ರಮವಾಗಿ ದಾಸ್ತಾನು ಇರಿಸಿರುವ ಮಾಹಿತಿಯಂತೆ ಬೈಂದೂರು ಆಹಾರ ನಿರೀಕ್ಷಕ ವಿನಯ ಕುಮಾರ್ ನೇತೃತ್ವದಲ್ಲಿ ದಾಳಿ ಮಾಡಲಾಗಿದೆ.
ಗೋದಾಮಿನಲ್ಲಿ ಅಕ್ಕಿ ತುಂಬಿದ ಚೀಲಗಳನ್ನು ಪರಿಶೀಲಿಸಿದಾಗ ತಲಾ 50 ಕೆಜಿಯಷ್ಟು ಬೆಳ್ತಿಗೆ ಅಕ್ಕಿ ಇರುವ ಒಟ್ಟು 160 ಚೀಲಗಳು ಇದ್ದು, ಒಟ್ಟು 80 ಕ್ವಿಂಟಾಲ್ ಅಕ್ಕಿ ಇರುವುದು ಕಂಡು ಬಂದಿದೆ. ಈ ಅಕ್ಕಿಯ ಮೌಲ್ಯ 1,92,000 ರೂ. ಎಂದು ಅಂದಾಜಿಸಲಾಗಿದೆ ಅಧಿಕಾರಿಗಳು ತಿಳಿಸಿದ್ದಾರೆ. ಇವುಗಳನ್ನು ತಂಡ ವಶಪಡಿಸಿಕೊಂಡಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.