ಗಂಗೊಳ್ಳಿ: ತಾಲೂಕಿನ ಮರವಂತೆ ಮಹಾರಾಜ ಶ್ರೀ ವರಹಸ್ವಾಮಿ ದೇವಸ್ಥಾನಕ್ಕೆ ಮಂಗಳವಾರ ಮಧ್ಯಾಹ್ನ ಕಳವು ಮಾಡಲು ಯತ್ನಿಸಿ ಬರಿಗೈಯಲ್ಲಿ ಮರಳಿದ್ದು, ದಂಪತಿಗಳು ಇದೀಗ ಪೊಲೀಸರ ಅತಿಥಿಯಾಗಿದ್ದು, ಪತಿ ಜೈಲು ಪಾಲಾದರೆ, ಪತ್ನಿ ರಿಮ್ಯಾಂಡ್ ಹೋಮ್ ಸೇರಿದ್ದಾಳೆ.
ಮಂಗಳವಾರ ಮಧ್ಯಾಹ ಪೂಜಾ ಕೆಲಸ ಮುಗಿಸಿ ಅರ್ಚರು ಗರ್ಭಗುಡಿಗೆ ಬಾಗಿಲು ಹಾಕಿ ಮನೆಗೆ ತೆರಳಿದ್ದ ಸಂದರ್ಭದಲ್ಲಿ ಕಂಬದಕೋಣೆ ನಿವಾಸಿ ಕರುಣಾಕರ ದೇವಾಡಿಗ ಹಾಗೂ 17 ವರ್ಷ ವಯಸ್ಸಿನ ಆತನ ಪತ್ನಿ ದೇವಸ್ಥಾನಕ್ಕೆ ಭಕ್ತರಂತೆ ತೆರಳಿದ್ದಾರೆ.
ಮೊದಲು ಹೊರಗಡೆ ಇದ್ದ ದೇವರಿಗೆ ಕೈಮುಗಿದು ದೇವಸ್ಥಾನ ಪ್ರವೇಶಿಸಿ ಕಾಣಿಕೆ ಡಬ್ಬ ಒಡೆಯುವ ಪ್ರಯತ್ನ ಮಾಡಿ ವಿಫಲರಾಗಿದ್ದಾರೆ. ನಂತರ ಗರ್ಭಗುಡಿಯನ್ನೂ ಪ್ರವೇಶಿಸಿ ಬರಿಗೈಯಲ್ಲಿ ಹಿಂದಕ್ಕೆ ಮರಳಿದ್ದಾರೆ. ಈ ಕೃತ್ಯ ದೇವಸ್ಥಾನ ಸಿಸಿಟಿವಿಯಲ್ಲಿ ದಾಖಲಾಗಿದೆ.
ದೇವಸ್ಥಾನ ಕಳವು ಪ್ರತ್ನ ನಡೆಸಿದ ಬಗ್ಗೆ ಗಂಗೊಳ್ಳಿ ಠಾಣೆಯಲ್ಲಿ ವ್ಯವಸಥಾಪನಾ ಸಮಿತಿ ಅಧ್ಯಕ್ಷ ಸತೀಶ್ ಎಂ.ನಾಯಕ್ ದೂರು ನೀಡಿದ್ದು, ಸಿಸಿಟಿವಿ ದೃಶ್ಯಾವಳಿ ಆಧರಿಸಿ ಕಳವು ಯತ್ನ ನಡೆಸಿದ ದಂಪತಿಯನ್ನು ಗಂಗೊಳ್ಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
- Advertisement -
ಬೈಂದೂರು ತಾಲೂಕು ಕಂಬದಕೋಣೆ ಗ್ರಾಮ ಕರುಣಾಕರ ದೇವಾಡಿಗ ಭದ್ರಾವತಿಯ ಅಪ್ರಾಪ್ತ ಯುವತಿ ಮದುವೆಯಾಗಿದ್ದು, ಕಂಬದಕೋಣಿಯಲ್ಲಿ ಇಬ್ಬರು ವಾಸವಾಗಿದ್ದರು. ಅಪ್ರಾಪ್ತ ಯುವತಿ ಮದುವೆಯಾದ ಬಗ್ಗೆ ಕರುಣಾಕರ ಮೇಲೆ ಪ್ರಕರಣ ಕೂಡಾ ದಾಖಲಾಗಿದೆ ಎನ್ನಲಾಗಿದೆ.
ಕಳ್ಳರು ಗರ್ಭಗುಡಿ ಪ್ರವೇಶಿಸಿದ್ದರಿಂದ ಮರುದಿನ ದೇವಳದಲ್ಲಿ ಭಕ್ತರಿಗೆ ಪ್ರವೇಶ ನಿಷೇಧಿಸಲಾಗಿತ್ತು. ಗರ್ಭಗುಡಿ ಅಶುದ್ಧವಾಗಿದ್ದರಿಂದ ಶುದ್ಧಿ, ಹೋಮಗಳು ನಡೆಸಿ ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು.