ಕುಂದಾಪುರ: ಬಾಯಲ್ಲಿ ನೀರೂರಿಸಿದ ಆಹಾರ ಉತ್ಪಾದನೆ ಮತ್ತು ಮಾರಾಟ ಮೇಳ

ಕುಂದಾಪುರ: ಬಾಯಲ್ಲಿ ನೀರೂರಿಸಿದ ಆಹಾರ ಉತ್ಪಾದನೆ ಮತ್ತು ಮಾರಾಟ ಮೇಳ ಮಳಿಗೆಗಳನ್ನು ಹಾಕಿ ತಾವೇ ತಯಾರಿಸಿದ ಬಗೆಬಗೆಯ ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವ ವರ್ತಕರು, ವಿವಿಧ ತಿಂಡಿ-ತಿನಿಸುಗಳನ್ನು ಹಣ ಕೊಟ್ಟು ಖರೀದಿಸುತ್ತಿರುವ ಗ್ರಾಹಕರು.

News Desk
3 Min Read

ಕುಂದಾಪುರ: ಬಾಯಲ್ಲಿ ನೀರೂರಿಸಿದ ಆಹಾರ ಉತ್ಪಾದನೆ ಮತ್ತು ಮಾರಾಟ ಮೇಳ ಮಳಿಗೆಗಳನ್ನು ಹಾಕಿ ತಾವೇ ತಯಾರಿಸಿದ ಬಗೆಬಗೆಯ ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವ ವರ್ತಕರು, ವಿವಿಧ ತಿಂಡಿ-ತಿನಿಸುಗಳನ್ನು ಹಣ ಕೊಟ್ಟು ಖರೀದಿಸುತ್ತಿರುವ ಗ್ರಾಹಕರು. ಇನ್ನು ಗ್ರಾಹಕರನ್ನು ಸೆಳೆಯಲು ಇತರರೊಂದಿಗೆ ಸ್ಪರ್ಧೆಗಿಳಿದು ಮಾತನಾಡುತ್ತಿರುವ ಸ್ವಾಗತಕಾರರು. ಇದೇನೊ ಶಾಪಿಂಗ್ ಮಾಲ್ ಅಂದುಕೊಂಡಿದ್ದರೆ ನಿಮ್ಮ ಊಹೆ ತಪ್ಪು. ಇವರೆಲ್ಲರೂ ವಿದ್ಯಾರ್ಥಿಗಳು ಆದರೆ ಇಂದು ಮಾತ್ರ ಪಕ್ಕಾ ವ್ಯಾಪಾರಿಗಳಾಗಿ ಬದಲಾಗಿದ್ದಾರೆ. ಅಷ್ಟಕ್ಕೂ ಇದರಲ್ಲೇನು ವಿಶೇಷ ಅಂತೀರಾ? ಈ ಕುರಿತಾದ ಒಂದು ವರದಿ ಇಲ್ಲಿದೆ.

ವಿದ್ಯಾರ್ಥಿಗಳಲ್ಲಿ ವ್ಯಾವಹಾರಿಕ ಕೌಶಲ್ಯ ಬೆಳೆಸುವ ಉದ್ದೇಶದಿಂದ ಕುಂದಾಪುರ ಎಜ್ಯುಕೇಶನಲ್ ಸೊಸೈಟಿ ಆಡಳಿತದ ಕುಂದಾಪುರ ಬಿಬಿ ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ ಏರ್ಪಡಿಸಿದ್ದ ವ್ಯಾಪಾರ ಮೇಳವಿದು. ವಿದ್ಯಾರ್ಥಿಗಳು ಕಾಲೇಜು ಆವರಣದಲ್ಲಿ ತಾವೇ ತಯಾರಿಸಿದ ಆಹಾರ ಪದಾರ್ಥಗಳನ್ನು ಮಾರಾಟ ಮಾಡುತ್ತಿರುವುದು ಎಲ್ಲರ ಗಮನ ಸೆಳೆಯಿತು. ಒಟ್ಟು ಏಳು ಅಂಗಡಿಗಳಿದ್ದು, ಒಂದೊಂದು ಅಂಗಡಿಗಳಲ್ಲಿ ಐದಕ್ಕಿಂದ ಹೆಚ್ಚು ಸ್ಟಾಲ್‍ಗಳಿದ್ದವು.

ಪಾನಿ ಪುರಿ, ಶೇವ್ ಪುರಿ, ಕೊಕೊನಟ್ ಲಡ್ಡು, ಗೋಲ್ಗಪ್ಪ, ಚುರ್ಮುರಿ, ಸ್ಯಾಂಡ್ ವಿಚ್, ಬಟರ್ ಪ್ಲೇನ್, ಮಸಾಲ ಚಾಟ್, ಬೇಬಿ ಕಾರ್ನ್ ಫ್ರೈ, ಪಾಪ್ ಕಾರ್ನ್, ಸಮೋಸಾ, ವೆಜ್ ಸ್ಯಾಂಡ್‍ವಿಚ್, ಪೀನಟ್ ಚಾಟ್ಸ್, ಕರ್ಜುರ ಬರ್ಫಿ, ಡ್ರೈ ಜಾಮುನ್ ಮೊದಲಾದ ತಿನಿಸಿಗಳು ಗ್ರಾಹಕರನ್ನು ಆಕರ್ಷಿಸಿದವು. ಕಾಲೇಜಿನ ವಿದ್ಯಾರ್ಥಿಗಳು ಇವುಗಳನ್ನು ಖರೀದಿಸಿ ರುಚಿ ಸವಿದರು.

ಜೊತೆಗೆ ಬಿಸಲಿನ ತಾಪದಿಂದ ದಣಿವಾರಿಸಿಕೊಳ್ಳಲು ಕೊಕ್ಕುಮ್ ಜ್ಯೂಸ್, ಬಟರ್ ಮಿಲ್ಕ್, ಮೊಕ್ಟೈಲ್, ರೋಸ್, ಲೆಮನ್, ಫ್ರೆಶ್ ಲೈಮ್, ಆರೆಂಜ್ ಜ್ಯೂಸ್, ಪಿಸ್ತಾ ಸೇರಿದಂತೆ ವಿವಿಧ ಬಗೆಯ ಸ್ವೀಟ್ಸ್, ಕೇಕ್, ಐಸ್‍ಕ್ರೀಮ್‍ಗಳನ್ನು, ಬಗೆಬಗೆಯ ತಂಪು ಪಾನೀಯಗಳನ್ನು ಖರೀದಿಸಲು ವಿದ್ಯಾರ್ಥಿಗಳು ಮುಗಿಬಿದ್ದರು. ಜೊತೆಗೆ ಸ್ಟೇಶನರಿ, ಕಂಗನ್ ಸ್ಟೋರ್ಸ್, ಕಾಯಿ ಅಂಗಡಿ, ವೀಳ್ಯದೆಲೆ, ವಿವಿಧ ಹೂವಿನ ಗಿಡಗಳ ನರ್ಸರಿಯೂ ಇತ್ತು. ವಿಶೇಷವೆಂದರೆ ವಿದ್ಯಾರ್ಥಿಗಳು ತಾವೇ ವಿವಿಧ ಔಷಧೀಯ ಗಿಡಗಳ ಮೂಲಕ ತಯಾರಿಸಿದ ನಿಸರ್ಗ ನಿಧಿ ಹೆಸರಿನ ಆಯುರ್ವೇದ ತೈಲಗಳು ಮಾರಾಟ ಮೇಳದಲ್ಲಿ ಗಮನ ಸೆಳೆಯಿತು.

- Advertisement -

ಬೆಳಿಗ್ಗೆ 10 ಗಂಟೆಗೆ ಕಾಲೇಜಿನ ಸ್ಥಾಪಕ ಪ್ರಾಂಶುಪಾಲರಾದ ಸೀಮಾ ಪಿ ಶೆಟ್ಟಿ ಉದ್ಘಾಟಿಸಿದ ಬಳಿಕ ಆರಂಭಗೊಂಡ ವ್ಯಾಪಾರ ಮಳಿಗೆ ಮಧ್ಯಾಹ್ನ ಎರಡು ಗಂಟೆಯ ತನಕವೂ ನಡೆಯಿತು. ವ್ಯಾಪಾರ ಮೇಳದಲ್ಲಿ ವಿದ್ಯಾರ್ಥಿಗಳು, ಉಪನ್ಯಾಸಕರು, ಭೋದಕೇತರ ವೃಂದದವರು ಗ್ರಾಹಕರಾಗಿ ಖರೀದಿಯಲ್ಲಿ ತಲ್ಲೀನರಾದ ದೃಶ್ಯಗಳು ಕಂಡುಬಂದವು. ವಿವಿಧ ಬಗೆಯ ಮಾಡೆಲ್‍ಗಳು, ಬೊಂಬೆಗಳು ಗ್ರಾಹಕರನ್ನು ಆಕರ್ಷಿಸಿದವು.

ಸೋಮವಾರವೇ ಉತ್ಪನ್ನಗಳ ಜಾಹೀರಾತು ಬಿಡುಗಡೆ ಮಾಡಲಾಗಿದ್ದು, ಮಂಗಳವಾರ ಉಳಿದ ವಿದ್ಯಾರ್ಥಿಗಳಿಗೆ ತಮ್ಮ ಉತ್ಪನ್ನಗಳ ಮಾಹಿತಿಯನ್ನು ಮನವರಿಕೆ ಮಾಡಲಾಗಿದೆ. ಆಹಾರ ಮೇಳದ ಜೊತೆಗೆ ವಿವಿಧ ಮನೋರಂಜನಾ ಕ್ರೀಡೆಗಳನ್ನೂ ಆಯೋಜಿಸಲಾಗಿತ್ತು. ಲಕ್ಕಿ ಡ್ರಾ, ಬಾಲ್‍ಗಳ ಮೂಲಕ ಲೋಟ ಕೆಡುವುದು ಮುಂತಾದ ಆಟಗಳನ್ನು ವಿದ್ಯಾರ್ಥಿಗಳು ಹಣ ಪಾವತಿಸಿ ಆಡಿ ಮಜಾ ಸವಿದರು. ಮಾರಾಟ ಮಳಿಗೆಯಲ್ಲಿ ಆಹಾರ ಸಿದ್ದಪಡಿಸುವುದು, ಆ ಬಳಿಕ ಮಾರಾಟ ಮಾಡುವುದು, ಅದರಲ್ಲೂ ಮುಖ್ಯವಾಗಿ ಇತರರೊಂದಿಗೆ ಸ್ಪರ್ಧೆಗಿಳಿದು ಮಾರಾಟ ಮಾಡುವುದು ವಿಶೇಷವಾಗಿತ್ತು.

ಈ ಕಾರ್ಯಕ್ರಮ ಕೇವಲ ಉತ್ಪನ್ನಗಳ ತಯಾರಿ ಹಾಗೂ ಮಾರಾಟಕ್ಕೆ ಮಾತ್ರ ಸೀಮಿತವಾಗಿರದೇ ಇನ್ನೆರಡು ದಿನಗಳ ಬಳಿಕ ಮಾರಾಟದ ಸಂಪೂರ್ಣ ಆಯವ್ಯಯ ಪಟ್ಟಿಯನ್ನು ತಯಾರಿಸಿ ಪ್ರಸ್ತುತಪಡಿಸಿದ ಬಳಿಕ ಅತ್ಯುತ್ತಮವಾಗಿ ಪ್ರಸ್ತುತಪಡಿಸಿದ ತಂಡಕ್ಕೆ ಬಹುಮಾನ ಕೊಡಲಾಗುತ್ತದೆ. ಏಳು ತಂಡಗಳಲ್ಲಿ ಯಾರು ಆಕರ್ಷಕವಾಗಿ ಅಂಗಡಿಗಳನ್ನು ರಚಿಸಿದ್ದಾರೆ, ಮಾರುಕಟ್ಟೆ ಕೌಶಲ್ಯ, ಪ್ರಸ್ತುತಿ, ಜಾಹೀರಾತು, ವಸ್ತುಗಳ ಗುಣಮಟ್ಟ ಮತ್ತು ಯಾವ ರೀತಿಯಲ್ಲಿ ಮಾರಾಟ ಮಾಡಿದ್ದಾರೆ ಎನ್ನುವ ಬಗ್ಗೆ ತೀರ್ಪುಗಾರರು ಅಂಕ ನೀಡಲಿದ್ದಾರೆ.

ಒಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ವ್ಯವಹಾರ ನಡೆಸುವುದು ಎಷ್ಟು ಕಷ್ಟವಿದೆ, ಗ್ರಾಹಕರನ್ನು ಹೇಗೆ ಸೆಳೆಯಬೇಕು, ಗ್ರಾಹಕರೊಂದಿಗೆ ಹೇಗೆ ವರ್ತಿಸಬೇಕು ಎನ್ನುವ ಅಂಶಗಳು ವಿದ್ಯಾರ್ಥಿ ದಿಸೆಯಲ್ಲೇ ಅರಿವಾಗಬೇಕು ಎಂಬ ಸದುದ್ದೇಶದಿಂದ ಕಾಲೇಜು ಪ್ರಾಂಶುಪಾಲರು ಮತ್ತು ಆಡಳಿತ ಮಂಡಳಿ ಇಂತಹ ವಿಭಿನ್ನ ಪ್ರಯತ್ನಕ್ಕೆ ಕೈ ಹಾಕಿ ಯಶಸ್ಸು ಕಂಡಿದೆ.

- Advertisement -
TAGGED:
Share this Article
Leave a comment
adbanner