ಕುಂದಾಪುರ, ಜು.26: ಕುಂದಾಪ್ರ ಕನ್ನಡ ಭಾಷಿಕರ ಸಂಭ್ರಮ 4ನೇ ವರ್ಷದ ವಿಶ್ವ ಕುಂದಾಪ್ರ ಕನ್ನಡ ದಿನ ವಿಶ್ವದ ವಿವಿಧೆಡೆ ಪ್ರತಿ ವರ್ಷ ಆಚರಿಸಲಾಗುತ್ತಿದೆ. ಶಿರೂರಿನಿಂದ ಹೆಬ್ರಿ ಬ್ರಹ್ಮಾವರದ ತನಕ ವಿಸ್ತರಿಸಿರುವ ಕುಂದಾಪ್ರ ಕನ್ನಡ ಭಾಷಾ ಸೊಬಗಿನ ವಿಶಿಷ್ಟತೆಯನ್ನು ಹಂಚಿಕೊಳ್ಳುತ್ತಾ ಸಂಭ್ರಮಿಸುವ ಸಲುವಾಗಿ 2019ರಿಂದ ಆಸಾಡಿ ಅಮವಾಸ್ಯೆ ದಿನ ವಿಶ್ವ ಕುಂದಾಪ್ರ ಕನ್ನಡ ದಿನ ಆಚರಣೆಗೆ ಚಾಲನೆ ನೀಡಲಾಗಿದ್ದು, ಈ ಭಾರಿ ಜೂನ್ 28ರಂದು ಆಚರಿಸಲಾಗುತ್ತಿದೆ.
ಕುಂದಾಪುರ ತಾಲೂಕಿನ ವಿವಿಧೆಡೆ ಸಂಭ್ರಮ:
ಜು.28ರಂದು ಕುಂದಾಪುರದಲ್ಲಿ ವಿಠಲವಾಡಿ ಫ್ರೆಂಡ್ಸ್ ವತಿಯಿಂದ ಹಾಡುಗಳ ಸ್ವರ್ಧೆ ಆಯೋಜಿಸಲಾಗಿದೆ. ತೆಕ್ಕಟ್ಟೆಯ ಹಯಗ್ರೀವ ಕಲ್ಯಾಣ ಮಂಟಪದಲ್ಲಿ ಯಕ್ಷದೀಪ ಕಲಾ ಟ್ರಸ್ಟ್ ವತಿಯಿಂದ ಕುಂದಾಪ್ರ ಕನ್ನಡತಿ ನಾಟ್ಯವಲ್ಲಿ ಎಂಬ ಯಕ್ಷಗಾನ ಪ್ರದರ್ಶನ ಜರುಗಲಿದೆ. ಡಾ. ಬಿ. ಬಿ. ಹೆಗ್ಡೆ ಕಾಲೇಜಿನಲ್ಲಿ ಮಕ್ಕಳಿಗಾಗಿ ವಿವಿಧ ಕಾರ್ಯಕ್ರಮ ಆಯೋಜಿಸಲಾಗಿದೆ.
ಮಿತ್ರ ಸಂಗಮ ಬೀಜಾಡಿ ವತಿಯಿಂದ ಮಿತ್ರ ಸೌಧದಲ್ಲಿ ಗಾಯಕಿ ಸುಷ್ಮಾ ಆಚಾರ್ಯ ಅವರಿಂದ ‘ಗೀತಾ ಗಾಯನ’, ವಿಶೇಷ ಲಘು ಉಪಹಾರ ಇರಲಿದೆ. ಕುಂದಾಪುರ ಜೆಸಿ ಭವನದಲ್ಲಿ ಎಸ್.ಪಿ. ಮ್ಯೂಸಿಕಲ್ ಕುಂದಾಪುರ ಆಶ್ರಯದಲ್ಲಿ ವಿಶ್ವ ಕುಂದಾಪ್ರ ಕನ್ನಡ ದಿನ, ಸಂಗೀತ ಕಾರ್ಯಕ್ರಮ, ಕಾರ್ತಿಕ್ರಾಜ್ ಸಂಗೀತ ಸಂಯೋಜನೆಯ ಹಾಡುಗಳ ಕಾರ್ಯಕ್ರಮ ನಡೆಯಲಿದೆ.
ಕರ್ಕುಂಜೆ ಸೊರೆಮಕ್ಕಿಯ ಯಕ್ಷಿ ಫ್ರೆಂಡ್ಸ್ ನವರು ಗಡ್ಜ್ ಗಮ್ಮತ್ತ್ ಎಂಬ ಕಾರ್ಯಕ್ರಮ ಹಮ್ಮಿಕೊಂಡಿದ್ದು ಅದರಲ್ಲಿ ‘ಕೆಸ್ ಪಂತ, ಹಾಡ್, ಬಣ್ಣು ಉಂಬೈ ಕೊಡ್ತಾ’ ಎಂದು ಕಾರ್ಯಕ್ರಮ ನಡೆಯಲಿದೆ. ಜು.27ರ ಸಂಜೆ 7 ಗಂಟೆಗೆ ಬೈಲ್ಮನಿ ಕ್ರಿಯೇಷನ್ಸ್ ಯುಟ್ಯೂಬ್ ಚಾನೆಲಿನಲ್ಲಿ ಬಯಾಪತಿಗೊಂದ್ ಪಟ್ಟಾಂಗ ಕಾರ್ಯಕ್ರಮ ನಡೆಯಲಿದ್ದು, ಕುಂದಾಪ್ರ ಕನ್ನಡದ ವಿವಿಧ ಕಲಾವಿದರು ಭಾಗವಹಿಸಲಿದ್ದಾರೆ.