ಬೆಳ್ಳಾರೆ: ಹತ್ಯೆಯಾದ ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಅವರ ಅಂತಿಮ ದರ್ಶನದ ವೇಳೆ ಪರಿಸ್ಥಿತಿ ಉದ್ವಿಗ್ನಗೊಂಡಿದ್ದು, ಪೊಲೀಸರು ಸ್ಥಳದಲ್ಲಿ ಲಾಠಿಚಾರ್ಜ್ ಮಾಡಿದ್ದಾರೆ.
ಲಾಠಿಚಾರ್ಜ್ ವೇಳೆ ಕೆಲವು ಕಾರ್ಯಕರ್ತರಿಗೆ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ಸಾಗಿಸಲಾಗುತ್ತಿದೆ ಎಂದು ತಿಳಿದು ಬಂದಿದೆ.ಇನ್ನು ಸದ್ಯ ಬೆಳ್ಳಾರೆ ಪೇಟೆಯಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಸ್ಥಳದಲ್ಲಿ ಪೊಲೀಸರು ಬಿಗಿ ಭದ್ರತೆ ಹೆಚ್ಚಿಸಿದ್ದಾರೆ.
ಬಿಜೆಪಿ ಸಂಸದ, ಶಾಸಕರಿಗೆ ಧಿಕ್ಕಾರದ ಬಿಸಿ – ಸ್ವಪಕ್ಷದ ಕಾರ್ಯಕರ್ತರಿಂದಲೇ ಘೇರಾವ್
ಹತ್ಯೆಯಾಗಿರುವ ಬಿಜೆಪಿ ಯುವನಾಯಕ ಪ್ರವೀಣ್ ನೆಟ್ಟಾರ್ ಅವರ ಮೃತದೇಹದ ಅಂತಿಮ ದರ್ಶನದ ವೇಳೆ ಬೆಳ್ಳಾರೆ ಜಂಕ್ಷನಿಗೆ ಆಗಮಿಸಿದ ಸಂಸದ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ ಹಿಂದೂ ಸಂಘಟನೆಯ ಕಾರ್ಯಕರ್ತರು ಧಿಕ್ಕಾರ ಕೂಗಿರುವ ಘಟನೆ ನಡೆದಿದೆ.
ನಳಿನ್ ಕುಮಾರ್ ಕಟೀಲ್, ಸಚಿವ ಸುನೀಲ್ ಕುಮಾರ್ ಮತ್ತು ಪುತ್ತೂರು ಶಾಸಕ ಸಂಜೀವ ಮಠಂದೂರು ಅವರು ಬೆಳ್ಳಾರೆಗೆ ಬಂದಿಳಿಯುತ್ತಿದ್ದಂತೆಯೇ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಇನ್ನು ಬಿಜೆಪಿ ನಾಯಕರ ವಿರುದ್ದ ಹಿಂದೂ ಸಂಘಟನೆಯ ಸಾವಿರಾರು ಕಾರ್ಯಕರ್ತರು ಸಂಸದರು, ಸಚಿವರು ಮತ್ತು ಶಾಸಕರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
- Advertisement -
ಎಡಿಜಿಪಿ ಅಲೋಕ್ಕುಮಾರ್ ಎರಡು ದಿನ ಸುಳ್ಯದಲ್ಲಿ ಮೊಕ್ಕಾಂ
ಸುಳ್ಯದ ಬೆಳ್ಳಾರೆಯಲ್ಲಿ ಮಂಗಳವಾರ ರಾತ್ರಿ ನಡೆದ ದ.ಕ. ಜಿಲ್ಲಾ ಬಿಜೆಪಿ ಯುವ ಮೋರ್ಚಾ ಕಾರ್ಯಕಾರಿಣಿ ಸದಸ್ಯ ಪ್ರವೀಣ್ ನೆಟ್ಟಾರ್ ಹತ್ಯೆ ಹಿನ್ನೆಲೆಯಲ್ಲಿ ಖಡಕ್ ಐಪಿಎಸ್ ಅಧಿಕಾರಿ ಎಡಿಜಿಪಿ ಅಲೋಕ್ಕುಮಾರ್ ಇಂದು ಸುಳ್ಯಕ್ಕೆ ಆಗಮಿಸಲಿದ್ದು, ಎರಡು ದಿನ ಸುಳ್ಯದಲ್ಲೇ ಮೊಕ್ಕಾಂ ಹೂಡಲಿದ್ದಾರೆ.

ಪಶ್ಚಿಮ ವಲಯ ಐಜಿಪಿ ದೇವಜ್ಯೋತಿ ರೇ ಹಾಗೂ ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೃಷಿಕೇಶ್ ಸೊನಾವಣೆ ಅವರಿಂದ ಘಟನೆಯ ಸಂಪೂರ್ಣ ಮಾಹಿತಿಯನ್ನು ಪಡೆದುಕೊಂಡಿದ್ದಾರೆ. ಸದ್ಯ ಬೆಳ್ಳಾರೆಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಸೆಕ್ಷನ್ 144 ಜಾರಿಗೊಳಿಸಲಾಗಿದೆ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ವಿಭಾಗದ ಎಡಿಜಿಪಿ ಅಲೋಕ್ಕುಮಾರ್ ಬೆಂಗಳೂರಿನಿಂದ ಮಂಗಳೂರಿಗೆ ಆಗಮಿಸಲಿದ್ದಾರೆ.ಬಳಿಕ ಸುಳ್ಯಕ್ಕೆ ಆಗಮಿಸಿ ಎರಡು ದಿನ ಇಲ್ಲೇ ಮೊಕ್ಕಾಂ ಹೂಡಲಿದ್ದಾರೆ.