ಮಂಗಳೂರು, ಜು 31:ಸುರತ್ಕಲ್ನ ಫಾಝಿಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳು ಹತ್ಯೆ ವೇಳೆ ಬಳಸಿದ್ದ ಕಾರಿನ ಮಾಲಕನನ್ನು ವಿಚಾರಣೆಗಾಗಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಫಾಝಿಲ್ ಹತ್ಯೆ ಆರೋಪಿಗಳು ಹತ್ಯೆ ವೇಳೆ ಬಳಕೆ ಮಾಡಿದ್ದ ಕಾರಿನ ಮಾಲಕನನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈತ ಕಾರನ್ನು ಬಾಡಿಗೆಗೆ ನೀಡುವವರಾಗಿದ್ದು, ಆರೋಪಿಗಳು ಕಾರು ಬಾಡಿಗೆಗೆ ಪಡೆದಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ವಿಚಾರಣೆಗಾಗಿ ಪೊಲೀಸರು ಕಾರು ಮಾಲಕನನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.
ಈಗಾಗಲೇ ಈ ಪ್ರಕರಣ ಸಂಬಂಧಿಸಿ 21 ಮಂದಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು, ವಿಚಾರಣೆ ನಡೆಸಲಾಗುತ್ತಿದೆ. ಕೃತ್ಯದಲ್ಲಿ ನೇರವಾಗಿ ಭಾಗಿಯಾಗಿರುವ ನಾಲ್ವರು ಮತ್ತು ಇತರ ಇಬ್ಬರನ್ನು ತೀವ್ರ ವಿಚಾರಣೆಗೊಳಪಡಿಸಲಾಗುತ್ತಿದ್ದು, ಶೀಘ್ರ ಬಂಧಿಸಲ್ಪಡಲಿದ್ದಾರೆ ಎಂದು ಮೂಲಗಳು ತಿಳಿಸಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ.
ಅಲ್ಲದೆ ವಶಕ್ಕೆ ತೆಗೆದುಕೊಂಡವರ ವಿಚಾರಣೆ ವೇಳೆ ಆರೋಪಿಗಳ ಕುರಿತು ಪೊಲೀಸರಿಗೆ ಮಹತ್ವದ ಸುಳಿವು ಸಿಕ್ಕಿದೆ ಎಂದೂ ಹೇಳಲಾಗುತ್ತಿದೆ.ಮಂಗಳೂರು ಹೊರವಲಯದ ಸುರತ್ಕಲ್ ನಲ್ಲಿ ಗುರುವಾರ ರಾತ್ರಿ ಮಂಗಳಪೇಟೆ ನಿವಾಸಿ 23 ವರ್ಷದ ಫಾಝಿಲ್ನ ಮೇಲೆ ಮಾರಕಾಸ್ತ್ರಗಳಂದ ಹಲ್ಲೆ ಮಾಡಿ ಹತ್ಯೆ ಮಾಡಲಾಗಿತ್ತು.