ಉಳ್ಳಾಲ: ಮದುವೆಯಾದ ಹದಿನೈದು ದಿನದಲ್ಲೇ ನವವಿವಾಹಿತೆಯೊಬ್ಬಳು ವಿಷ ಸೇವಿಸಿ ಆತ್ಮಹತ್ಯೆಗೈದ ಘಟನೆ ಮಂಗಳೂರು ಹೊರವಲಯದ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಅಂಬ್ಲಮೊಗರು ಗ್ರಾಮದ ಕೋಟ್ರಗುತ್ತುವಿನ ರಶ್ಮಿ ವಿಶ್ವಕರ್ಮ(24) ಆತ್ಮಹತ್ಯೆಗೈದ ಯುವತಿ.

ಘಟನೆ ವಿವರ
ಗಂಜಿಮಠ ಮೂಲದ ಹಾಗೂ ದುಬಾಯಿಯಲ್ಲಿ ಇಂಜಿನಿಯರ್ ಆಗಿರುವ ಸಂದೀಪ್ ಎಂಬಾತನ ಜೊತೆ ರಶ್ಮಿಗೆ ಆರು ತಿಂಗಳ ಹಿಂದೆ ನಿಶ್ಚಿತಾರ್ಥ ನಡೆದಿದ್ದು, ಕಳೆದ ಆಗಸ್ಟ್ 21 ರಂದು ವಿವಾಹ ನೆರವೇರಿತ್ತು. ಸೆ.3 ರಂದು ರಶ್ಮಿಯ ಅಕ್ಕನ ಮನೆಯಲ್ಲಿ ಔತನ ಕೂಟ ಏರ್ಪಡಿಸಲಾಗಿದ್ದು, ಅದೇ ದಿನ ರಶ್ಮಿ ಇಲಿಪಾಷಣ ಸೇವಿಸಿದ್ದಳು ಎನ್ನಲಾಗಿದೆ.
ಬಳಿಕ ಆಕೆಯನ್ನು ದೇರಳಕಟ್ಟೆಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಆಕೆ ಮೃತಪಟ್ಟಿದ್ದಾಳೆ.ಈ ಬಗ್ಗೆ ಕೊಣಾಜೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.