ಮಂಗಳೂರು: “ಸಮಾನತೆ, ಸಾಮರಸ್ಯ ಮತ್ತು ಸಹಬಾಳ್ವೆಗಾಗಿ ಸ್ವಾತಂತ್ರ್ಯ” ಎಂಬ ಧ್ಯೇಯವಾಕ್ಯದೊಂದಿಗೆ ಯುನಿವೆಫ್ ಕರ್ನಾಟಕ 76 ನೆಯ ಸ್ವಾತಂತ್ರ್ಯೋತ್ಸವವನ್ನು ಫಳ್ನೀರ್ನ ಲುಲು ಸೆಂಟರ್ನಲ್ಲಿ ವಿಜೃಂಭಣೆಯಿಂದ ಆಚರಿಸಿತು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಉಳ್ಳಾಲ ಸಯ್ಯಿದ್ ಮದನಿ ಚಾರಿಟೇಬಲ್ ಅಧ್ಯಕ್ಷ ರಶೀದ್ ಹಾಜಿಯವರು ಧ್ವಜಾರೋಹಣವನ್ನು ನೆರವೇರಿಸಿದರು.
“ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ ಬಲಿದಾನ ಮಾಡಿದ ಮುಸ್ಲಿಮ್ ವೀರರ ಹೆಸರುಗಳನ್ನು ಇತಿಹಾಸದಿಂದ ಅಳಿಸಿ ಹಾಕುವ ಹುನ್ನಾರದ ಮಧ್ಯೆ ಸ್ವಾತಂತ್ರ್ಯೋತ್ಸವದ ಮೂಲಕ ಮುಂದಿನ ತಲೆಮಾರಿಗೆ ಮುಸ್ಲಿಮ್ ಸಮುದಾಯದ ಸ್ವಾತಂತ್ರ್ಯ ಹೋರಾಟದ ಇತಿಹಾಸವನ್ನು ನೆನಪಿಸಿ ಹೊಸ ಇತಿಹಾಸ ಬರೆಯುವುದು ಕಾಲದ ಅಗತ್ಯ.ಈ ನಿಟ್ಟಿನಲ್ಲಿ ಯುನಿವೆಫ್ ಕರ್ನಾಟಕ ಹಮ್ಮಿಕೊಂಡಿರುವ ಈ ಕಾರ್ಯಕ್ರಮ ಶ್ಲಾಘನೀಯ” ಎಂದು ಅವರು ಹೇಳಿದರು.
ಫೋರಂ ಫಾರ್ ಜಸ್ಟಿಸ್ ಇದರ ಅಧ್ಯಕ್ಷ ಅಲಿ ಹಸನ್ ಮಾತನಾಡಿ “ಮುಸ್ಲಿಮರ ದೇಶಪ್ರೇಮದ ಬಗ್ಗೆ ಸಂಶಯಗಳನ್ನು ಬಿತ್ತಿ ಸಮಾಜದ ಧ್ರುವೀಕರಣಕ್ಕೆ ಶ್ರಮಿಸುತ್ತಿರುವ ಕೋಮುವಾದಿ ಶಕ್ತಿಗಳಿಗೆ ಬಹಳ ಶಕ್ತ ಉತ್ತರ ನೀಡಲು ಮುಸ್ಲಿಮ್ ಸಮುದಾಯ ಸನ್ನದ್ಧರಾಗಬೇಕು. ದೇಶಪ್ರೇಮದ ಪಾಠವನ್ನು ನಾವು ಇವರಿಂದ ಕಲಿಯಬೇಕಾಗಿಲ್ಲ” ಎಂದು ಹೇಳಿದರು.
ಯುನಿವೆಫ್ ಕರ್ನಾಟಕ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ “ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಮುಸ್ಲಿಮ್ ಹೋರಾಟಗಾರರನ್ನು ಕಾಲಕ್ರಮೇಣ ನೇಪಥ್ಯಕ್ಕೆ ಸರಿಸಿ ಕೇವಲ ಮುಸ್ಲಿಮೇತರ ಹೆಸರುಗಳನ್ನು ಪ್ರಸ್ತಾಪ ಮಾಡುತ್ತಿರುವ ಇಂದಿನ ಯುಗದಲ್ಲಿ ದೇಶದ ಸ್ವಾತಂತ್ರ್ಯಕ್ಕಾಗಿ ಮುಸ್ಲಿಮರ ಕೊಡುಗೆಗಳನ್ನು ನೆನಪಿಸಬೇಕಾಗಿದೆ. ದೇಶದ ಸಾಮಾನ್ಯ ವ್ಯಕ್ತಿ ನಿರ್ಭೀತಿಯಿಂದ ಬದುಕುವುದೇ ನೈಜ ಸ್ವಾತಂತ್ರ್ಯ” ಎಂದು ಹೇಳಿದರು. ಕುದ್ರೋಳಿ ಶಾಖಾಧ್ಯಕ್ಷ ವಕಾಝ್ ಅರ್ಶಲನ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಉಬೈದುಲ್ಲಾ ಬಂಟ್ವಾಳ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು. ಅದ್ನಾನ್ ಕಿರಾತ್ ಪಠಿಸಿದರು. ವೇದಿಕೆಯಲ್ಲಿ ಕಾರ್ಯಕ್ರಮ ಸಂಚಾಲಕ ಮತ್ತು ಯುನಿವೆಫ್ ಕಾರ್ಯದರ್ಶಿ ಸೈಫುದ್ದೀನ್ ಉಪಸ್ಥಿತರಿದ್ದರು.