ಹೊಸದಿಲ್ಲಿ: ಕಳೆದ ವರ್ಷದ ನವೆಂಬರ್ ತಿಂಗಳಲ್ಲಿ ಏರ್ ಇಂಡಿಯಾ (Air India) ವಿಮಾನದಲ್ಲಿ ಹಿರಿಯ ಮಹಿಳೆಯೊಬ್ಬರ ಮೇಲೆ ಮೂತ್ರ ವಿಸರ್ಜಿಸಿದ್ದ ಮುಂಬೈ ಮೂಲದ ಆರೋಪಿ ಶಂಕರ್ ಮಿಶ್ರಾನನ್ನು (Shankar Mishra) ದಿಲ್ಲಿ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅದಕ್ಕಾಗಿ ಪೊಲೀಸರು ಆತನ ಚಲನವಲನದ ಮೇಲೆ ನಿಗಾ ಇರಿಸಲು ಕೈಗೊಂಡ ವಿನೂತನ ಪತ್ತೆ ಕ್ರಮಗಳು ಅಚ್ಚರಿಗೆ ಕಾರಣವಾಗಿವೆ ಎಂದು ndtv.com ವರದಿ ಮಾಡಿದೆ.
ಆರೋಪಿ ಶಂಕರ್ ಮಿಶ್ರಾ ಪತ್ತೆಗೆ ವಿಮಾನ ನಿಲ್ದಾಣಗಳಿಗೆ ಮುನ್ಸೂಚನೆ ನೀಡಿದ್ದ ದಿಲ್ಲಿ ಪೊಲೀಸರು, ಆತನ ಫೋನ್ ಕರೆಗಳ ಮೇಲೆ ನಿಗಾ, ಡಿಜಿಟಲ್ ಹೆಜ್ಜೆಗುರುತುಗಳ ಪತ್ತೆ, ಆತನ ಬ್ಯಾಂಕ್ ವಹಿವಾಟುಗಳ ಮೇಲ್ವಿಚಾರಣೆಯಂತಹ ವಿನೂತನ ಪತ್ತೆ ಕ್ರಮಗಳನ್ನು ಅಳವಡಿಸಿಕೊಂಡಿದ್ದರು ಎಂದು ದಿಲ್ಲಿ ಪೊಲೀಸ್ ಉನ್ನತ ಮೂಲಗಳು ತಿಳಿಸಿವೆ.
ಆರೋಪಿ ಶಂಕರ್ ಮಿಶ್ರಾ ವಾಸಸ್ಥಳದ ಬಗ್ಗೆ ದೊರೆತ ಖಚಿತ ಸುಳಿವನ್ನು ಆಧರಿಸಿ ದಿಲ್ಲಿ ಪೊಲೀಸರು ಒಂದು ತಂಡವನ್ನು ಬೆಂಗಳೂರಿಗೆ ರವಾನಿಸಿದ್ದರು. 71 ವರ್ಷದ ಮಹಿಳೆಯೊಬ್ಬರು ತನ್ನ ಮೇಲೆ ಮೂತ್ರ ವಿಸರ್ಜನೆ ಮಾಡಲಾಗಿದೆ ಎಂದು ಪೊಲೀಸರಿಗೆ ದೂರು ನೀಡಿದ್ದರು. ಆ ದೂರನ್ನು ಆಧರಿಸಿದ ಪ್ರಾಥಮಿಕ ಮಾಹಿತಿ ವರದಿಯು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿ, ಆರೋಪಿಯನ್ನು ಬಂಧಿಸಬೇಕು ಎಂಬ ಆಗ್ರಹ ತೀವ್ರಗೊಂಡಿತ್ತು. ಇದರಿಂದ ಭೀತಿಗೊಂಡ ಶಂಕರ್ ಮಿಶ್ರಾ ತಲೆ ಮರೆಸಿಕೊಂಡಿದ್ದ ಎನ್ನಲಾಗಿದೆ.
ಆರೋಪಿ ಶಂಕರ್ ಮಿಶ್ರಾ ತನ್ನ ಮೊಬೈಲ್ ಫೋನ್ ಅನ್ನು ಸ್ವಿಚ್ಡ್ ಆಫ್ ಮಾಡಿದ್ದರೂ, ತನ್ನ ಗೆಳೆಯರೊಂದಿಗೆ ಸಂಪರ್ಕ ಸಾಧಿಸಲು ಸಾಮಾಜಿಕ ಮಾಧ್ಯಮ ಖಾತೆಗಳನ್ನು ಬಳಸುತ್ತಿದ್ದ. ಇದರಿಂದ ಪೊಲೀಸರಿಗೆ ಆತನನ್ನು ಪತ್ತೆ ಹಚ್ಚಲು ಸಾಧ್ಯವಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
- Advertisement -
34 ವರ್ಷದ ಶಂಕರ್ ಮಿಶ್ರಾ, ಕನಿಷ್ಠ ಪಕ್ಷ ಒಂದು ಪ್ರದೇಶಗಳಲ್ಲಿ ತನ್ನ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ಗಳೆರಡನ್ನೂ ಬಳಸಿದ್ದ ಎಂದು ಮೂಲಗಳು ತಿಳಿಸಿವೆ.
ಈ ಕುರಿತು ಪ್ರತಿಕ್ರಿಯಿಸಿರುವ ಪೊಲೀಸ್ ಉಪ ಆಯುಕ್ತ (ವಿಮಾನ ನಿಲ್ದಾಣ), ರವಿಕುಮಾರ್ ಸಿಂಗ್, “ಮೂತ್ರ ವಿಸರ್ಜನೆ ಪ್ರಕರಣದಲ್ಲಿ ಆರೋಪಿಯಾಗಿರುವ ಶಂಕರ್ ಮಿಶ್ರಾನನ್ನು ಬೆಂಗಳೂರಿನಲ್ಲಿ ದಿಲ್ಲಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ದಿಲ್ಲಿಗೆ ಕರೆ ತರಲಾಗಿದ್ದು, ಪ್ರಕರಣದ ಕುರಿತು ಮತ್ತಷ್ಟು ತನಿಖೆ ಪ್ರಗತಿಯಲ್ಲಿದೆ” ಎಂದು ತಿಳಿಸಿದ್ದಾರೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.
“ಆರೋಪಿಯು ಸಂಜಯನಗರದಲ್ಲಿರುವ ತನ್ನ ಸಹೋದರಿಯ ಮನೆಯಲ್ಲಿ ಉಳಿದುಕೊಂಡಿದ್ದ. ಬೆಂಗಳೂರು ನಗರ ಪೊಲೀಸರು ಆರೋಪಿಯನ್ನು ಬಂಧಿಸಲು ದಿಲ್ಲಿ ಪೊಲೀಸರಿಗೆ ನೆರವು ನೀಡಿದರು” ಎಂದು ಬೆಂಗಳೂರು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನ್ಯೂಯಾರ್ಕ್-ದೆಹಲಿ ಏರ್ಇಂಡಿಯಾ ವಿಮಾನದಲ್ಲಿ ಮಹಿಳೆ ಮೇಲೆ ಮೂತ್ರ ಮಾಡಿ ರಾದ್ಧಾಂತ ಸೃಷ್ಟಿಸಿದ್ದ ಪ್ರಯಾಣಿಕ ಶಂಕರ್ ಮಿಶ್ರಾನನ್ನು ಅಮೆರಿಕಾ ಮೂಲದ ವೇಲ್ಸ್ ಫಾರ್ಗೋ ಕಂಪೆನಿ ಕೆಲಸದಿಂದ ವಜಾಗೊಳಿಸಿದೆ.
ಮಿಶ್ರಾ ಈ ಹಣಕಾಸು ಕಂಪೆನಿಯಲ್ಲಿ ಭಾರತದ ಉಪಾಧ್ಯಕ್ಷನಾಗಿದ್ದ. ಪ್ರಕರಣ ಈಗಾಗಲೇ ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದ್ದು, ಮುಂಬೈ ಮೂಲದ ಮಿಶ್ರಾ ತಲೆಮರೆಸಿಕೊಂಡಿದ್ದಾನೆ.ಬೆಂಗಳೂರು, ಮುಂಬೈ, ದಿಲ್ಲಿಯಲ್ಲಿ ಪೊಲೀಸರು ಹುಡುಕಾಟ ನಡೆಸುತ್ತಿದ್ದು, ಲುಕ್ಔಟ್ ನೋಟಿಸ್ ಜಾರಿಗೊಳಿಸಲಾಗಿದೆ.